ಕೊಮಿಷಿಯ
 
ಪ್ರಾಚೀನ ರೋಮಿನ ಚುನಾಯಿತ ಶಾಸಕಾಂಗ ಸಭೆಗಳು: ಕೊಮಿಷಿಯಂ ಎಂಬ ಪದದ ಬಹುವಚನರೂಪ. ಒಂದು ನಿರ್ದಿಷ್ಟ ದಿನದಂದು ಸಾಮಾನ್ಯಜನರ ಕ್ಯೂರಿಯ, ಸೆಂಚೂರಿಯ ಅಥವಾ ಟ್ರೈಬಸ್ ಎಂಬ ಮೂರು ವಿಧಗಳಲ್ಲೊಂದು ರೀತಿಯ ಸಭೆಯನ್ನು ಸೇರಿಸಲಾಗುತ್ತಿತ್ತು. ಕ್ರಮೇಣ ಕೊಮಿಷಿಯವೆಂದರೆ ಚುನಾವಣೆಗಳೆಂಬ ಅರ್ಥ ಬಳಕೆಗೆ ಬಂತು. ಆಡಳಿತಾಧಿಕಾರಿಗಳಾದ ಮ್ಯಾಜಿಸ್ಟ್ರೇಟರ ತೀರ್ಮಾನಗಳಿಗೆ ವಿಧಾಯಕತೆಯನ್ನು ನೀಡುವ ಸಲುವಾಗಿ ಕೊಮಿಷಿಯ ಸಭೆಗಳನ್ನು ಕರೆಯಲಾಗಿತ್ತು. ಆದರೆ ಆ ತೀರ್ಮಾನಗಳ ವಿಧಿಗಳನ್ನು ಚರ್ಚಿಸುವ ಅಥವಾ ಅವಕ್ಕೆ ತಿದ್ದುಪಡಿ ಮಂಡಿಸುವ ಹಕ್ಕು ಸಭೆಗಳಿಗಿರಲಿಲ್ಲ. ಆ ಸಭೆಗಳ ಸದಸ್ಯತ್ವದಲ್ಲಿ ವ್ಯತ್ಯಾಸಗಳಿದ್ದರೂ ಶ್ರೀಮಂತವರ್ಗ ಅಂಥ ಸಭೆಗಳಲ್ಲಿ ಭಾಗವಹಿಸದಿದ್ದರೂ ಅವುಗಳ ತೀರ್ಮಾನಗಳು ಸರ್ವಗ್ರಾಹ್ಯವಾಗಿದ್ದುವು. ತಾತ್ತ್ವಿಕವಾಗಿ ಕೊಮಿಷಿಯ ಸಭೆಗಳಿಗೆ ಪರಮಾವಧಿಕಾರವಿತ್ತು. ಆದರೆ ವಸ್ತುತಃ ಮ್ಯಾಜಿಸ್ಟ್ರೇಟರು ಮಂಡಿಸಿದ ಸಲಹೆಗಳ ವಿನಾ ಬೇರಾವ ಬಗೆಯ ತೀರ್ಮಾನಗಳನ್ನೂ ಈ ಸಭೆಗಳು ಕೈಗೊಳ್ಳುವಂತಿರಲಿಲ್ಲ.

	ಕೊಮಿಷಿಯ ಸಭೆಗಳಲ್ಲಿ ಮುಖ್ಯವಾದುವು ಮೂರು : ಕೊಮಿಷಿಯ ಕ್ಯೂರಿಯೇಟ, ಕೊಮಿಷಿಯ ಸೆಂಚೂರಿಯೇಟ ಮತ್ತು ಕಾನ್ಸಿಲಿಯೇ ಪ್ಲೆಬಿಸ್.	

	ಕೊಮಿಷಿಯ ಕ್ಯೂರಿಯೇಟ: ಪ್ರಾಚೀನ ರಾಜರ ಕಾಲದಿಂದಲೂ ಬಳಕೆಯಲ್ಲಿದ್ದ 30 ಕ್ಯೂರಿಯಗಳ ಸಭೆ. ಗಣರಾಜ್ಯದ ಕಾಲದಲ್ಲಿ ಅದರ ಪ್ರಾಮುಖ್ಯ ತಗ್ಗಿತು. ಆದರೂ ಯಾವುದೇ ಮಸೂದೆ ಶಾಸನವಾಗಬೇಕಾದರೆ ತಾತ್ತ್ವಿಕವಾಗಿ ಅದರ ಒಪ್ಪಿಗೆ ಬೇಕಾಗಿತ್ತು. ಕ್ಯೂರಿಯ ಕ್ಯಾಲಬ್ರ ಎಂಬ ಹೆಸರಿನಿಂದ ಈ ಸಭೆ ಸೇರಿ ಉಯಿಲು ದತ್ತು, ಮತೀಯ ತೀರ್ಮಾನ ಮತ್ತು ಧಾರ್ಮಿಕ ಗುರುಗಳ ನೇಮಕಕ್ಕೆ ಒಪ್ಪಿಗೆ ನೀಡಬೇಕಾಗಿತ್ತು.	

	ಕೊಮಿಷಿಯ ಸೆಂಚೂರಿಯೇಟ: ರೋಮಿನ ಚಕ್ರವರ್ತಿಗಳಲ್ಲಿ ಕಡೆಯವರಲ್ಲೊಬ್ಬನಾದ ಸರ್ವಿಯಸ್ ಟುಲ್ಲಿಯಸನಿಂದ ನಿರ್ಮಾಣವಾದ ಕೊಮಿಷಿಯ ಸೆಂಚೂರಿಯೇಟ ರೋಮ್ ಸರ್ಕಾರದ ಆಡಳಿತ ಘಟಕಗಳಲ್ಲಿ ಅತ್ಯಂತ ಕಿರಿದಾದ್ದು. ರಕ್ಷಣಸೇವೆಗೆ ಮೀಸಲಾದ ಸಭೆ, ರೋಮಿನ ಪ್ರಜೆಗಳೆಲ್ಲರನ್ನೂ ಅವರವರ ಅಂತಸ್ತು, ಐಶ್ವರ್ಯಗಳ ಆಧಾರದ ಮೇಲೆ ವಿವಿಧ ವರ್ಗಗಳನ್ನಾಗಿ ವಿಭಾಗಿಸಿ, ಆ ಆಧಾರದ ಮೇಲೆ ಅವರು ಒದಗಿಸಬೇಕಾಗಿದ್ದ ಸೈನ್ಯಬಲವನ್ನು ನಿರ್ಧರಿಸಲಾಗುತ್ತಿತ್ತು. ಕ್ರಿ.ಪೂ 5ನೆಯ ಶತಮಾನದಿಂದ ಕ್ರಿ.ಪೂ 3ನೆಯ ಶತಮಾನದವರೆಗೆ ಪ್ರಮುಖ ರಾಜಕೀಯ ಶಕ್ತಿಯಾಗಿದ್ದ ಕೊಮಿಷಿಯ ಸೆಂಚೂರಿಯೇಟದ ಸಭೆಯನ್ನು ಸೈನ್ಯದ ಕಹಳೆಯೂದಿ ಕರೆಯಲಾಗುತ್ತಿತ್ತು. ಉಚ್ಛಾಧಿಕಾರಿಗಳಾದ ಮ್ಯಾಜಿಸ್ಟ್ರೇಟರೇ ಅದರ ಅಧ್ಯಕ್ಷತೆ ವಹಿಸಬೇಕಾಗಿತ್ತು. ಈ ಸಭೆಯ ಸದಸ್ಯರ ಸಂಖ್ಯೆ 193; ಅದರಲ್ಲಿ 98 ಸದಸ್ಯರಿದ್ದ ಶ್ರೀಮಂತ ವರ್ಗದ್ದೇ ಬಹುಮತವಿತ್ತು. ಕ್ರಿ,ಪೂ 241ರಲ್ಲಿ ಆ ಸಭೆಯ ಸದಸ್ಯತ್ವದ ವಿಚಾರದಲ್ಲಿ ತಿದ್ದುಪಡಿಯಾಗಿ, ಶ್ರೀಮಂತವರ್ಗದ ಸದಸ್ಯತ್ವವನ್ನು 70ಕ್ಕೆ ಇಳಿಸಿದರೂ ಅವರ ಪ್ರಾಬಲ್ಯವೇನೋ ಮಾಸದೆ ಉಳಿಯಿತು. ರಾಜ್ಯದ ವಿವಿಧ ಶ್ರೇಷ್ಠ ಅಧಿಕಾರಿಗಳಾದ ಕಾನ್ಸಲ್, ಪ್ರೇಟರ್, ಸೆನ್ಸಾರ್ ಮುಂತಾದವರ ಚುನಾವಣೆ, ಮರಣದಂಡನೆಯಂಥ ತೀವ್ರ ಅಪರಾಧಗಳ ಪುನರ್ವಿಮರ್ಶೆ ಮುಂತಾದ ಕಾರ್ಯಭಾರಗಳನ್ನು ಆ ಸಭೆ ನಿರ್ವಹಿಸಬೇಕಾಗಿತ್ತು. ಶತ್ರುರಾಜ್ಯಗಳ ಮೇಲೆ ಯುದ್ಧ ಸಾರಲು ಆ ಸಭೆಗೆ ಮಾತ್ರ ಹಕ್ಕಿರುತ್ತಿತ್ತು. ಪಂಗಡಗಳ ಸಮಿತಿಗಳು ಅಸ್ತಿತ್ವಕ್ಕೆ ಬಂದ ಮೇಲೆ ಕೊಮಿಷಿಯ ಸೆಂಚೂರಿಯೇಟವನ್ನು ಶಾಸಕಾಂಗ ಕಾರ್ಯಕ್ಕಾಗಿ ಸಭೆ ಸೇರಿಸುವುದು ಕಡಿಮೆಯಾಯಿತು. ಮ್ಯಾಜಿಸ್ಟ್ರೇಟರನ್ನು ಆರಿಸುವ ಹಕ್ಕು ಈ ಸಭೆಯದ್ದಾಗಿದ್ದರೂ ಅವರ ಹೆಸರುಗಳನ್ನು ಆ ಮೊದಲೇ ಸೂಚಿಸಿರುತ್ತಿದ್ದುದರಿಂದ ಕೊಮಿಷಿಯ ಸೆಂಚೂರಿಯೇಟದ ಪ್ರಾಮುಖ್ಯ ಇಲ್ಲವಾಯಿತು. ಕ್ರಿ,ಶ 3ನೆಯ ಶತಮಾನದವರೆಗೂ ಚುನಾವಣೆಗಳನ್ನು ಘೋಷಿಸಲು ಅದನ್ನು ಕರೆಯಲಾಗುತ್ತಿತ್ತು.	

	ಕಾನ್ಸಿಲಿಯಂ ಪ್ಲೆಬಿಸ್: ಜನಸಾಮಾನ್ಯರನ್ನು (ಪ್ಲೆಬಿಯನ್ಸ್) ಸದಸ್ಯರಾಗಿ ಹೊಂದಿದ್ದ ಈ ಸಭೆಯನ್ನು ಜನಸಾಮಾನ್ಯರಿಂದ ಚುನಾಯಿತರಾದ ಟ್ರಿಬ್ಯೂನರೆಂಬ ಮ್ಯಾಜಿಸ್ಟ್ರೇಟರೇ ಕರೆಯಬೇಕಾಗಿತ್ತು ಮತ್ತು ಅವರೇ ಅದರ ಅಧ್ಯಕ್ಷರಾಗಿರುತ್ತಿದ್ದರು. ಅದು ಕ್ರಮೇಣ ಪ್ರಾಬಲ್ಯ ಪಡೆದರೂ ಅದರ ತೀರ್ಮಾನಗಳನ್ನು ಶ್ರೀಮಂತ ವರ್ಗದ ಪ್ರಜೆಗಳು ಮಾನ್ಯ ಮಾಡುತ್ತಿದ್ದರೆಂಬುದಕ್ಕೆ ಆಧಾರಗಳಿಲ್ಲ. ಮಧ್ಯ ಮತ್ತು ಉತ್ತರಕಾಲೀನ ಗಣರಾಜ್ಯದ ಸಮಯದಲ್ಲಿ ಪ್ರಮುಖ ಶಾಸಕಾಂಗ ಸಭೆಯಾಗಿ ಅದು ಸ್ಥಾನ ಗಳಿಸಿತು. ಯುದ್ಧ ಶಾಂತಿಸಂಧಾನಗಳ ತೀರ್ಮಾನ, ಸಾಧಾರಣ ಅಪರಾಧಿಗಳಿಗೆ ದಂಡ ವಿಧಿಸುವುದು ಮುಂತಾದ ಹಕ್ಕುಗಳು ಈ ಸಭೆಗೆ ಸೇರಿದ್ದುವು.	ಕೊಮಿಷಿಯ ಟ್ರಿಬ್ಯೂಟಿ: ರಾಜ್ಯದ ಎಲ್ಲ ವರ್ಗಗಳ ಪ್ರಜೆಗಳನ್ನೂ ಒಳಗೊಂಡಿದ್ದ ಈ ಸಭೆ ನಾಲ್ಕನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರಬಹುದು. ಈ ಸಭೆಗೂ ಶಾಸಕಾಂಗದ ಹಕ್ಕಿತ್ತು. ಕಾನ್ಸಲರು, ಪ್ರೇಟರರು ಮತ್ತು ಇತರ ಅಧಿಕಾರಿಗಳು ಸಭೆಯ ಅಧ್ಯಕ್ಷರಾಗಿರಬಹುದಾಗಿತ್ತು. ಇದು ಜನರಿಂದ ಶಾಸನಗಳನ್ನು ತಯಾರಿಸುವ ಪ್ರಮುಖ ಸಂಸ್ಥೆಯಾಗಿತ್ತು ಮತ್ತು ಸಣ್ಣಪುಟ್ಟ ಅಧಿಕಾರಿಗಳನ್ನು ಕೊಮಿಷಿಯ ಟ್ರಿಬ್ಯೂಟ ಚುನಾಯಿಸಬಹುದಾಗಿತ್ತು. ಕ್ರಮೇಣ ಪಂಗಡಗಳ ಪ್ರಭಾವ ಹೆಚ್ಚಾಗುತ್ತಿದ್ದುದೂ ಈ ಸಭೆಯ ಸದಸ್ಯರಲ್ಲಿ ಲಂಚಗುಳಿತನ ಬೆಳೆದುದೂ ಇದರ ಪ್ರಾಮುಖ್ಯ ಅಳಿಯಲು ಕಾರಣವಾಯಿತು.

	ರೋಂ ಚಕ್ರಾಧಿಪತ್ಯ ವಿಸ್ತಾರಗೊಂಡು, ಕೊಮಿಷಿಯಗಳಿಗೆ ಸದಸ್ಯರು ದೂರ ಪ್ರದೇಶಗಳಿಂದ ಬರಲಾರಂಭಿಸಿದುದರಿಂದಲೂ ನ್ಯಾಯಾಂಗ ಮತ್ತು ಶಾಸಕಾಂಗ ಹಕ್ಕುಗಳು ಹಿರಿಯ ಅಧಿಕಾರಿಗಳ ಹಸ್ತಗತವಾದುದರಿಂದಲೂ ಕೊಮಿಷಿಯ ಸಭೆಗಳ ಸ್ಥಾನಮಾನ ನಶಿಸಿಹೋಯಿತು. 											(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ